ಬೆಂಗಳೂರು: ಮಿಸ್ಟರ್ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ಬಿಡಿ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ(CN Ashwath Narayan) ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿರುವ ಅವರು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.
‘ರಾಮನಗರಕ್ಕೂ ನನಗೂ ಏನು ಸಂಬಂಧ ಎಂದು ಕೇಳುವ ಡಿ.ಕೆ.ಶಿವಕುಮಾರ್(DK Shivakumar) ಅವರ ಪ್ರಶ್ನೆಗೆ ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎಂಬ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಿದೆ. ಮಿಸ್ಟರ್ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ಬಿಡಿ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ’ ಅಂತಾ ಹೇಳಿದ್ದಾರೆ.
ತಮ್ಮ ಮತ್ತೊಂದು ಪೋಸ್ಟ್ ನಲ್ಲಿ ‘ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಹೇಳಿರುವಂತೆ ಡಿಕೆ ಬ್ರದರ್ಸ್ಗಳಿಗೆ ಅಭದ್ರತೆ ಕಾಡುತ್ತಿದೆ. ಗೂಂಡಾಗಳನ್ನು ಕಟ್ಟಿ ಮೆರೆದವರನ್ನು ಮರೆಯಾಗಿಸುವ ಕಲೆ ನಮ್ಮ ರಾಮನಗರದ ಜನತೆಗೆ ಗೊತ್ತಿದೆ. ಇಲ್ಲಿ ಅಭಿವೃದ್ಧಿಗೆ ಮಾತ್ರ ಬೆಲೆ. ಹಾದಿ ತಪ್ಪಿದ ರಾಜಕಾರಣಿಗಳಿಂದ ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವುದು ಬೇಡ’ ಅಂತಾ ಟೀಕಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಯತ್ನ
ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿ
ರಾಮನಗರದಲ್ಲಿ ಸೋಮವಾರ ನಡೆದ ಸರ್ಕಾರಿ ಕಾರ್ಯಕ್ರಮ(Ramanagara Incident)ದಲ್ಲಿ ನಡೆದಿದ್ದ ಘಟನೆ ಸಂಬಂಧ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದರು. ಈ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದ ಅವರು, ‘ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್(DK Suresh) ಮತ್ತವರ ಗ್ಯಾಂಗ್ ತೋರಿದ ಗೂಂಡಾ ವರ್ತನೆ ಹಾಗೂ ಅದನ್ನು ಡಿ.ಕೆ.ಶಿವಕುಮಾರ್ ಅವರು ಸಮರ್ಥಿಸಿಕೊಂಡ ರೀತಿ ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿಯ ಪುಂಡಾಟಿಕೆ ಡಿಕೆ ಬ್ರದರ್ಸ್ಗಳು ಕಲಿತು ಬಂದ ಕಲೆ. ರಾಮನಗರದಲ್ಲಿ ನಮ್ಮ ಸರ್ಕಾರ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ. ವೇದಿಕೆಯ ಮೇಲೆ ಮಾತನಾಡಿರುವ ವಿಷಯಕ್ಕೆ ವೇದಿಕೆಯಲ್ಲೇ ಉತ್ತರ ನೀಡುವ ಅವಕಾಶ ಅವರಿಗಿತ್ತು. ಆದರೆ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ವರ್ತಿಸಿದ್ದಾರೆ’ ಅಂತಾ ಕುಟುಕಿದ್ದರು.
‘ಈ ಭಾಗದ ಪ್ರತಿನಿಧಿಗಳಾಗಿ ಕೇವಲ ಘೋಷಣೆ ಮಾಡುವುದರಲ್ಲೇ ಕಾಲ ಕಳೆದಿದ್ದಾರೆ. ಆದರೆ ಅವನ್ನೆಲ್ಲ ಕಾರ್ಯರೂಪಕ್ಕೆ ತರುವ ಕೆಲಸವನ್ನು ನಮ್ಮ ಬಿಜೆಪಿ ಸರ್ಕಾರ ಮಾಡುತ್ತಿದೆ. ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಈ ಜಿಲ್ಲೆಗಾಗಿ ಮಾಡಿರುವ ಕೆಲಸಗಳನ್ನು ನಾವು ಅಲ್ಲಗಳೆಯುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಇದನ್ನು ಮೀರಿ ಕೃಷಿ, ಕೈಗಾರಿಕೆ, ಶಿಕ್ಷಣ,ಉದ್ಯೋಗಕ್ಕೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆ ತಂದಿದ್ದೇವೆ’ ಅಂತಾ ಹೇಳಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರ, ಹೊಣೆಗೇಡಿತನದ ಜೊತೆಗೆ ‘ರಿಪಬ್ಲಿಕ್ ಆಫ್ ರೌಡಿಸಂ’ ಕೂಡ ಕಾಂಗ್ರೆಸ್ ಅವಿಭಾಜ್ಯ ಅಂಗ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.